ತಿಮ್ಮರಸ
	ಕನ್ನಡದಲ್ಲಿ ಮಾರ್ಕಂಡೇಯ ಪುರಾಣವೆಂಬ ಕೃತಿಯನ್ನು ರಚಿಸಿರುವ ಕವಿ. ಕಾಲ ಸು. 1650. ಜಾತಿಯಲ್ಲಿ ಈತ ಬ್ರಾಹ್ಮಣ. ಭಾರದ್ವಾಜ ಗೋತ್ರಕ್ಕೆ ಸೇರಿದ್ದು ಆಶ್ವಲಾಯನ ಪಂಗಡದವ. ಋಗ್ವೇದಿ ಸದ್ವಂಶರ ಕನ್ನಡಿಗ ಪಾಲ್ಕುರಿಕೆಯ ಕರಣಿಕನಾದ ಬುಳ್ಳನ ಮಗ. ಯದುಗಿರಿಯ (ಈಗಿನ ಮೇಲುಕೋಟೆ) ಶ್ರೀ ನರಸಿಂಹಸ್ವಾಮಿಯನ್ನು ಗ್ರಂಥದಾದಿಯಲ್ಲಿ ಸ್ತುತಿಸಿ ಅವನ ಕರುಣೆಯಿಂದ ಕಾವ್ಯರಚನೆ ಮಾಡಿರುವುದಾಗಿ ತಿಳಿಸಿದ್ದಾನೆ. ಯುಧಿಷ್ಟಿರನಿಗೆ ಮಾರ್ಕಂಡೇಯ ಮುನಿ ಹೇಳಿದ ರಾಮಕಥೆಯೇ ಮಾರ್ಕಂಡೇಯ ಪುರಾಣದ ವಸ್ತು. ಕೃತಿಯಲ್ಲಿ 20 ಸಂಧಿಗಳಿದ್ದು ಒಟ್ಟು 1,500 ವಾರ್ಧಕ ಷಟ್ಪದೀ ಪದ್ಯಗಳಿವೆ. ರಾಮನ ವನವಾಸದಿಂದ ಆರಂಭವಾಗಿ ಕಥೆ ರಾಮಪಟ್ಟಾಭಿಷೇಕದಲ್ಲಿ ಮುಕ್ತಾಯವಾಗುತ್ತದೆ. 

	ಕವಿಯ ಶೈಲಿ ಲಲಿತವೂ ಹೃದ್ಯವೂ ಆಗಿದೆ. ಪ್ರಾಸ, ಯಮಕ, ವರ್ಣಾವೃತ್ತಿಗಳನ್ನು ಹೇರಳವಾಗಿ ಬಳಸಿರುವುದಾಗಿ ಕವಿಯೇ ಹೇಳಿಕೊಂಡಿದ್ದಾನೆ.								 	 (ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ